ಫಾಲ್ಗುನ ಮಾಸ
	ಚೈತ್ರಾದಿ ಚಂದ್ರಮನ ತಿಂಗಳುಗಳಲ್ಲಿ ಹನ್ನೆರಡನೆಯದು. ಸೂರ್ಯ ಕುಂಭ ರಾಶಿಯಲ್ಲಿರುವಾಗ ಬರುವ ಅಮಾವಾಸ್ಯೆಯ ಮಾರನೆಯ ದಿನದಿಂದ ಈ ಮಾಸ ಪ್ರಾರಂಭವಾಗಿ ಮೀನುಮಾಸದ ಅಮಾವಾಸ್ಯೆಯಂದು ಪೂರ್ತಿಯಾಗುತ್ತದೆ. ಕುಂಭ ಮತ್ತು ಮೀನ ಈ ಎರಡು ಮಾಸಗಳಲ್ಲಿ ಬರುವ ಅಮಾವಾಸ್ಯೆಗಳ ಮಧ್ಯವರ್ತಿಯ ಕಾಲವೇ ಫಾಲ್ಗುನಮಾಸ, ಶಿಶಿರಋತುವಿನ ಮಾಸಗಳಲ್ಲಿ ಇದು ಎರಡನೆಯದು. ಭಾರತ ಸರ್ಕಾರದ ಸಾಯನಸೌರಮಾಸಗಣನಾ ಪದ್ಧತಿಯಂತೆ ಈ ತಿಂಗಳಿಗೆ ಮಧು ಎಂದು ಹೆಸರು. ಮಧುಮಾಸ ಫೆಬ್ರವರಿ 13ನೆಯ ತಾರೀಕು ಪ್ರಾರಂಭವಾಗಿ ಮಾರ್ಚ್ 13 ಅಥವಾ 14ನೆಯ ತಾರೀಕು ಮುಗಿಯುತ್ತದೆ. ಈ ಮಾಸದ ಅಮಾವಾಸ್ಯೆಯಂದು ಚಾಂದ್ರಮಾನ ವರ್ಷ ಮುಕ್ತಯವಾಗುತ್ತದೆ. ಸಾಮಾನ್ಯವಾಗಿ ಈ ತಿಂಗಳಿನ ಹುಣ್ಣಿಮೆಯ ದಿವಸ ಫಲ್ಗುನೀ ನಕ್ಷತ್ರ ಸೇರುವುದರಿಂದ ಇದನ್ನು ಫಲ್ಗುನ ಎಂದು ಕರೆಯುವುದು ರೂಢಿಗೆ ಬಂದಿದೆ. ಪೂರ್ವಫಲ್ಗುನೀ (ಪುಬ್ಬು) ಉತ್ತರ ಫಲ್ಗುನೀ (ಉತ್ತರಾ) ಈ ಎರಡು ನಕ್ಷತ್ರಗಳಲ್ಲೊಂದು ಅಥವಾ ಇವುಗಳ ಹಿಂದುಮುಂದಿನ ನಕ್ಷತ್ರಗಳಲ್ಲೊಂದು ಈ ಹುಣ್ಣಿಮೆಯಂದು ಸೇರುತ್ತದೆ. ಈ ತಿಂಗಳಿನ ಕೃಷ್ಣಪಕ್ಷದ ಅಷ್ಟಮೀ ದಿವಸ ಮಾಡುವ ಅಷ್ಟಕಾಶ್ರಾದ್ಧವೇ ವರ್ಷಾಂತ್ಯದ ಅಷ್ಟಕಾಶ್ರದ್ಧ. ಹೋಲೀ ಹಬ್ಬ ಬರುವುದು ಈ ತಿಂಗಳಿನ ಹುಣ್ಣಿಮೆಯ ದಿವಸ. ಶ್ರೀರಾಮಕೃಷ್ಣ ಪರಮಹಂಸರು ಹುಟ್ಟಿದುದು ಈ ತಿಂಗಳಿನ ಶುಕ್ಲಪಕ್ಷದ ದ್ವಿತೀಯಾ ತಿಥಿಯಾ ದಿವಸ. ಈ ಮಾಸದಲ್ಲಿ ಹಲವಾರು ಕಡೆ ಪ್ರಸಿದ್ಧ ಜಾತ್ರೆ ಮತ್ತು ರಥೋತ್ಸವಗಳು ನಡೆಯುತ್ತವೆ.
(ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ